ಸಾಹಿತ್ಯ-ನಾಟಕ-ಚಿತ್ರರಂಗ ಪ್ರತಿಭೆಗಳು
|
ಶ್ರೀಯುತ ಡಾ|| ಮುಖ್ಯ ಮಂತ್ರಿ ಚಂದ್ರುರವರು ಮಾಜಿ ವಿಧಾನ ಪರಿಷತ್ ಸದಸ್ಯರು, ಮಾಜಿ ಅಧ್ಯಕ್ಷರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಸರ್ಕಾರ
|
ಡಾ||ಮುಖ್ಯಮಂತ್ರಿ ಚಂದ್ರು ಎಂಬ ಹೆಸರು ಸಾಹಿತ್ಯ, ಸಂಸ್ಕೃತಿ, ಚಲನಚಿತ್ರ, ಕಿರುತೆರೆ ಮತ್ತು ರಾಜಕೀಯ ಕ್ಷೇತ್ರದಲ್ಲಿ ಚಿರಪರಿಚಿತ ಹೆಸರು. ಉತ್ತಮ ವಾಗ್ಮಿಗಳು, ಹಾಸ್ಯ ಪ್ರಜ್ಞೆಯುಳ್ಳವರೂ, ಸ್ನೇಹವಂತರು, ನೇರ ನಡೆ-ನುಡಿಗೆ ಹೆಸರಾದ, ಬದ್ಧತೆ-ದಕ್ಷತೆಯಿಂದ ಕಾರ್ಯನಿರ್ವಹಿಸುವ ಸಂಕಷ್ಟದಲ್ಲಿ ಸ್ನೇಹಿತರಿಗಾಗಿ ಮರುಗುವ ಹೃದಯಂತ ಸಜ್ಜನ, ನಮ್ಮ ಚಂದ್ರುರವರು. ನೆಲಮಂಗಲ ತಾಲ್ಲೂಕಿನ ಹೊನ್ನಸಂದ್ರದ ಶ್ರೀಮತಿ ತಿಮ್ಮಮ್ಮ ಮತ್ತು ಶ್ರೀ ಎನ್.ನರಸಿಂಹಯ್ಯನವರ ೧ನೇಯವರಾಗಿ ಜನಸಿದ ಶ್ರೀಯುತ ಹೆಚ್.ಎನ್.ಚಂದ್ರಶೇಖರ್, ಮೂವರ ಸಹೋದರಿಯರ ತುಂಬು ಕುಟುಂಬ. ಜನನ: ೨೮-೦೮-೧೯೫೩ ರಲ್ಲಿ ಜನಿಸಿದರು. ಪ್ರಾಥಮಿಕ ಶಿಕ್ಷಣ ಹೊನ್ನಸಂದ್ರದಲ್ಲಿ, ನಂತರ ಬೆಂಗಳೂರಿನಲ್ಲಿ ಬಿ.ಎಸ್ಸಿ ಪದವೀಧರರಾದರು, ಶಾಲಾ ದಿನಗಳಲ್ಲೇ ನಾಟಕಗಳಲ್ಲಿ ಆಸಕ್ತಿ ಹೊಂದಿದ್ದು. ೧೯೭೦ ರಿಂದಲೇ ಕನ್ನಡ ಹವ್ಯಾಸೀ ರಂಗಭೂಮಿಯಲ್ಲಿ ಪಾಲ್ಗೊಂಡಿದ್ದರು. ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸುಮಾರು ೧೦ ವರ್ಷಗಳ ಕಾಲ ಸೇವೆ ಸಲ್ಲಿಸಿರುತ್ತಾರೆ. ಇವರು ವಿಜ್ಞಾನ ಪದವೀಧರರಾಗಿದ್ದು, ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಕೊಂಡಿರುತ್ತಾರೆ. ಇವರು ಕರ್ನಾಟಕ ಸರ್ಕಾರದಿಂದ ನೇಮಕವಾಗಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿರುತ್ತಾರೆ.
ಹೆಸರಾಂತ ರಂಗ ನಿರ್ದೇಶಕರುಗಳ ಜೊತೆ ಕೆಲಸ ಮಾಡಿರುತ್ತಾರೆ. ಇವರು ಮುಖ್ಯಮಂತ್ರಿ, ಮೂಕಿ-ಟಾಕಿ, ಎಲ್ಲಾರು ಮಾಡುವುದು, ಇವೇ ಮುಂತಾದ ಹಲವು ನಾಟಕಗಳ ನಿರ್ದೇಶನ ಮಾಡಿರುತ್ತಾರೆ. ೫೦೦ಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡಿರುವ ಮುಖ್ಯಮಂತ್ರಿ ನಾಟಕದಲ್ಲಿ ಇವರು ನಿರ್ವಹಿಸಿದ ಮುಖ್ಯಮಂತ್ರಿ ಪಾತ್ರವು ಇವರಿಗೆ ಅಪಾರ ಯಶಸ್ಸನ್ನು ತಂದುಕೊಟ್ಟಿದೆ. ಕರ್ನಾಟಕದ ಶಾಶ್ವತ ಮುಖ್ಯಮಂತ್ರಿ ಚಂದ್ರು ಎಂಬ ಖ್ಯಾತಿಯನ್ನು ನೀಡಿತು. ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ತಮ್ಮ ವಿಶಿಷ್ಟವಾದ ಅಭಿನಯ ಮತ್ತು ಮಾತುಗಾರಿಕೆಯಿಂದ ಕನ್ನಡದ ಜನಮನ ಗೆದ್ದಿದ್ದಾರೆ. ಖ್ಯಾತ ಚಿತ್ರ ಚಕ್ರವ್ಯೂಹದಿಂದ ಆರಂಭವಾಗಿ- ಡಕೋಟ ಪಿಕ್ಚರ‍್ಸ್‌ರವರೆಗೆ ಸುಮಾರು ೪೬೦ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಹಲವಾರು ಕಿರುತೆರೆ ಧಾರಾವಾಹಿಗಳಲ್ಲಿ ಅಭಿನಯಿಸಿರುತ್ತಾರೆ. ಉತ್ತಮ ನಿರ್ದೇಶಕ-ರಾಜ್ಯ ಪ್ರಶಸ್ತಿ, ಉತ್ತಮ ನಟ ಮುಂತಾದ ಹಲವು ಪ್ರಶಸ್ತಿಗಳು ಇವರ ಮುಡಿಗೇರಿ ಇವರ ಯಶಸ್ಸಿಗೆ ಶೋಭೆಯನ್ನು ತಂದಿರುತ್ತದೆ. ವಿಶ್ವ ಕನ್ನಡ ಸಮ್ಮೇಳನ, ಮ್ಯಾಂಚೆಸ್ಟರ್, ಇಂಗ್ಲೆಂಡ್, ವಿಶ್ವ ಶಾಂತಿ ಸಮ್ಮೇಳನ, ಪ್ಯಾರಿಸ್ ಮತ್ತು ಅಕ್ಕ ಸಮ್ಮೇಳನ, ಚಿಕಾಗೊ, ನಾವಿಕ - ನಾವು ವಿಶ್ವ ಕನ್ನಡಿಗರು ಸಮ್ಮೇಳನ, ಲಾಸ್ ಏಂಜಲೀಸ್‌ಗಳಲ್ಲಿ ಪ್ರತಿನಿಧಿಯಾಗಿ ಭಾಗವಹಿಸಿರುತ್ತಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಹೊಸ ಆಯಾಮ ನೀಡುವ ಹಿನ್ನಲೆಯಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅನುಷ್ಠಾನಗೊಳಿಸಲಾಗಿದೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಪ್ರತಿಷ್ಠಿತ ಕಾರ್ಯಕ್ರಮಗಳಾದ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗಮಾಡಿ ಅತಿ ಹೆಚ್ಚು ಅಂಕಗಳಿಸಿದ ರಾಜ್ಯ ಹಾಗೂ ಹೊರರಾಜ್ಯ ವಿದ್ಯಾರ್ಥಿಗಳಿಗೆ ಕನ್ನಡ ಮಾಧ್ಯಮ ಪ್ರಶಸ್ತಿ. ಕಾಲೇಜು ವಿದ್ಯಾರ್ಥಿಗಳಿಗೆ ಕನ್ನಡ ಜಾಗೃತಿ, ನ್ಯಾಯಾಲಯದಲ್ಲಿ ಕನ್ನಡದಲ್ಲೆ ತೀರ್ಪುನೀಡಿದ ನ್ಯಾಯಾಧೀಶರಿಗೆ ಕನ್ನಡ ಪುರಸ್ಕಾರ, ಗಣಕದಲ್ಲಿ ಕನ್ನಡ, ಕನ್ನಡೇತರರಿಗೆ ಕನ್ನಡ ಕಲಿಸಲು ಕನ್ನಡ ಕಲಿಕಾ ಕೇಂದ್ರಗಳ ಪ್ರಾರಂಭ, ಆಡಳಿತದಲ್ಲಿ ಕನ್ನಡ ಅನುಷ್ಠಾನಕ್ಕೆ ಅಧಿಕಾರಿಗಳಿಗೆ ತರಬೇತಿ, ಕಾರ್ಖಾನೆಗಳಿಗೆ ಭೇಟಿ, ಪರಿಶೀಲನಾ ಸಭೆ, ಕಾರ್ಖಾನೆಗಳಲ್ಲಿ ಕನ್ನಡ ಕಲಿಕೆ, ಕನ್ನಡ ನುಡಿತೇರು, ಕನ್ನಡ ನುಡಿ ಉತ್ಸವ, ಸೊಗಡಿನ ಸುದ್ದಿ, ಕನ್ನಡ ಚಿಂತನೆ, ಭಾಷಾ ಭಾವೈಕ್ಯ ಸಮಾವೇಶ, ಗಡಿನಾಡ ಸಮಾವೇಶ, ಪ್ರಾಚೀನ ಕಾವ್ಯ ರಸಗ್ರಹಣ ಶಿಬಿರ, ಹೊರನಾಡ ಕನ್ನಡಿಗರ ಸಮಾವೇಶ, ಕಾರ್ಮಿಕರಿಗೆ ಕನ್ನಡ ಜಾಗೃತಿ – ಮುಂತಾದ ಕಾರ್ಯಕ್ರಮಗಳ ಮೂಲಕ ಕನ್ನಡ ನಾಡು-ನುಡಿ ಸಂಸ್ಕೃತಿಯ ರಕ್ಷಣೆಗೆ ದಿಟ್ಟ ಹೆಜ್ಜೆಯನ್ನಿಟ್ಟಿದ್ದಾರೆ. ಉದ್ಯೋಗದಲ್ಲಿ ಕನ್ನಡಿಗರಿಗೆ ಆದ್ಯತೆ ನೀಡುವ ಡಾ|| ಸರೋಜಿನಿ ಮಹಿಷಿ ವರದಿ ಅನುಷ್ಠಾನಕ್ಕೆ ಒತ್ತು ನೀಡಿದ್ದಾರೆ. ಕನ್ನಡ ನಾಡು-ನುಡಿ ಗಡಿ ಸಮಸ್ಯೆಗಳ ಮೇಲೆ ವಿಶೇಷ ಬೆಳಕು ಚೆಲ್ಲುವ ಹಿನ್ನಲೆಯಲ್ಲಿ ನಾಡು-ನುಡಿ ಅಧ್ಯಯನ ವರದಿಯಲ್ಲಿ ಆಡಳಿತದಲ್ಲಿ ಕನ್ನಡ, ಉದ್ಯೋಗದಲ್ಲಿ ಕನ್ನಡ, ನ್ಯಾಯಾಂಗದಲ್ಲಿ ಕನ್ನಡ, ಗಣಕದಲ್ಲಿ ಕನ್ನಡ, ಒಳನಾಡ ಮತ್ತು ಹೊರನಾಡ ಕನ್ನಡಿಗರ ಸಮಸ್ಯೆಗಳ ಬಗೆಗಿನ ವರದಿಯನ್ನು ಅನುಷ್ಠಾನ ಮಾಡಲು ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ. ಕರ್ನಾಟಕದ ಜ್ವಲಂತ ಸಮಸ್ಯೆಗಳಾದ ರಾಷ್ಟ್ರೀಯ ಶಿಕ್ಷಣ ನೀತಿ, ರಾಷ್ಟ್ರೀಯ ಉದ್ಯೋಗ ನೀತಿ, ರಾಷ್ಟ್ರೀಯ ಜಲ ನೀತಿ, ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ, ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ, ಬೆಂಗಳೂರಿನ ರಾಷ್ಟ್ರೀಯ ನಾಟಕ ಶಾಲೆಗೆ ಸ್ವಾಯತ್ತತೆ ಪಡೆಯಲೆಂದು ರಾಷ್ಟ್ರದ ಪ್ರಧಾನ ಮಂತ್ರಿಗಳು, ಕೇಂದ್ರ ಸಚಿವರು ಹಾಗೂ ಕಾರ್ಯದರ್ಶಿಗಳ ಜೊತೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನೇತೃತ್ವದಲ್ಲಿ ನಿಯೋಗವನ್ನು ಎರಡು ಬಾರಿ ದೆಹಲಿಗೆ ಕರೆದುಕೊಂಡು ಹೋದ ಹೆಗ್ಗಳಿಕೆ ಇವರದಾಗಿದೆ. ಗಡಿ ಪ್ರದೇಶಗಳಲ್ಲಿನ ಸಮಸ್ಯೆಗಳ ಅಧ್ಯಯನ ಮತ್ತು ಪರಿಹಾರಕ್ಕಾಗಿ ಕೈಗೊಂಡ ಕನ್ನಡ ನುಡಿ-ಕನ್ನಡ ಗಡಿ ಜಾಗೃತಿ ಜಾಥವು ಕರ್ನಾಟಕದ ಪ್ರನುಖ ಕನ್ನಡ ಚಳುವಳಿಗಳಲ್ಲಿ ಒಂದು (೪೫ ದಿನಗಳ ೭೦೦೦ ಕಿ.ಮೀ. ಜಾಥಾ) ಈ ಜಾಥದ ಮೂಲಕ ೫೨ ಗಡಿ ತಾಲ್ಲೂಕುಗಳ ಕನ್ನಡಿಗರ ಬವಣೆಯನ್ನು ಕುರಿತು ಸಿದ್ದಪಡಿಸಿದ ಮುಖ್ಯಮಂತ್ರಿ ಚಂದ್ರು ವರದಿ ಖಾಸಗಿ ನಿರ್ಣಯವಾಘಿ ವಿಧಾನ ಪರಿಷತ್ತಿನಲ್ಲೂ ಮಂಡಿಸಲಾಗಿದೆ.
ಕನ್ನಡ ಪರ ಕಾಳಜಿ, ವಿಧಾನಸೌಧದ ಒಳಗೆ ಮತ್ತು ಹೊರಗೆ ಚಂದ್ರುರವರ ಹೋರಾಟವನ್ನು ಗಮನಿಸಿ ಗುಲ್ಬರ್ಗಾ ವಿಶ್ವವಿದ್ಯಾಲಯ ೨೦೧೦ನೇ ಸಾಲಿನ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಇವರ ಕಾಲಾವಧಿಯ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಪ್ರಕಟಣೆಗಳು: ಕರ್ನಾಟಕ ಏಕೀಕರಣಕ್ಕೆ ದುಡಿದ ಮಹನೀಯರು, ಬಯಲು ಸೀಮೆ ಭಾಷಾ ವೈವಿದ್ಯತೆ, ದೇಸೀ ಮಾತು, ನುಡಿ ಸೊಗಡು, ಆಡಳಿತ ಪದಕೋಶ, ಆಡಳಿತದಲ್ಲಿ ಕನ್ನಡ (ಆದೇಶಗಳು), ಆಡಳಿತ ಕನ್ನಡ (ಪ್ರಬಂಧಗಳು), ದಾರಿದೀವಿಗೆ, ಕನ್ನಡ ಜಾನಪದ ನಿಘಂಟು, ಕರ್ನಾಟಕ ಸಂಗಾತಿ, (ಪರಿಷ್ಕೃತ ಆವೃತ್ತಿ) ಗಡಿ ಕನ್ನಡಿಗರ ಕಥೆ-ವ್ಯಥೆ ೨೦೦೬, ಜೋಯಿಡಾ ವರದಿ (೨೦೦೯), ನಾಡು ನುಡಿ ಅಧ್ಯಯನ ವರದಿ, ನಡೆ-ನುಡಿ ಹಾದಿ (೫ ವರ್ಷದ ಸಾಧನೆ). ವಿದೇಶಗಳಲ್ಲಿ ಕನ್ನಡ ಅಧ್ಯನ ಪೀಠಗಳು: ಊಸ್‌ಬರ್ಗ್ ವಿಶ್ವವಿದ್ಯಾಲಯ, ಮುನಿಚ್ ವಿಶ್ವವಿದ್ಯಾಲಯ, ಹೈಡ್‌ಲಬರ್ಗ್ ವಿಶ್ವವಿದ್ಯಾಲಯ, ವಿಯನ್ನಾ ವಿಶ್ವವಿದ್ಯಾಲಯ. ಕನ್ನಡ ಸಮ್ಮೇಳನ ಮತ್ತು ಕಲಿಕಾ ಕೇಂದ್ರ: ಕಥಾರ್, ಕುವೈತ್, ಅಬುದಾಬಿ, ದುಬೈ, ಬೆಹೆರೇನ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ಯುರೋಪ್ ಖಂಡದಲ್ಲಿ ೧೫ ದೇಶಗಳು.
ಡಾ||ಮುಖ್ಯಮಂತ್ರಿ ಚಂದ್ರು-ವ್ಯಕ್ತಿ ವಿವರ ಸ್ಥಾನಮಾನಗಳು:
2008 -2014: ಅಧ್ಯಕ್ಷರು ಕನ್ನಡ ಅಭಿವೃದ್ಧಿ ಪ್ರಾಧಿಕಾರ
೨೦೧೦ : ಕನ್ನಡ ಪರ ಕಾಳಜಿ ಮತ್ತು ಹೋರಾಟವನ್ನು ಗಮನಿಸಿ ಗುಲ್ಬರ್ಗಾ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
೨೦೦೪-೨೦೧೦: ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು ೧೯೯೮-೨೦೦೪: ಸದಸ್ಯರು, ಕರ್ನಾಟಕ ವಿಧಾನ ಪರಿಷತ್ತು
೧೯೮೫-೧೯೯೦: ಶಾಸಕರು, ಕರ್ನಾಟಕ ವಿಧಾನ ಸಭೆ ೨೦೦೦: ಉಪಾಧ್ಯಕ್ಷರು, ಭಾರತೀಯ ಜನತಾ ಪಕ್ಷ
೧೯೯೫-೯೬: ಸದಸ್ಯರು, ಅಲ್ಪಸಂಖ್ಯಾತರ ಮತ್ತು ಹಿಂದುಳಿದ ವರ್ಗಗಳ ಅಭಿವೃದ್ಧಿ ಸಮಿತಿ.
೧೯೯೮-೯೯: ಸದಸ್ಯರು, ಹಕ್ಕು ಭಾಧ್ಯತಾ ಸಮಿತಿ
೧೯೮೭-೮೯: ಸದಸ್ಯರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಮಿತಿ
೧೯೮೮: ಪ್ಯಾರಿಸ್‌ನಲ್ಲಿ ನಡೆದ ವಿಶ್ವ ಶಾಂತಿ ಸಮ್ಮೇಳನದಲ್ಲಿ ಪ್ರತಿನಿಧಿ
೧೯೮೭: ಲಂಡನ್‌ನ ಮ್ಯಾಂಚೆಸ್ಟರ್‌ನಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ.
೧೯೭೫-೧೯೮೫: ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಆಡಳಿತ ಅನುಭವ
೧೯೭೦ ರಿಂದಲೇ ಕನ್ನಡದ ಹವ್ಯಾಸಿ ರಂಗಭೂಮಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿರುವುದು. ನಟನಾಗಿ, ನಿರ್ದೇಶಕನಾಗಿ, ತಂತ್ರಜ್ಞನಾಗಿ, ಸಂಘಟಕನಾಗಿ ಹಾಗೂ ಶ್ರೇಷ್ಠ ಮೂಕಾಭಿನಯ ಕಲಾವಿದನಾಗಿ ರಂಗಭೂಮಿಯಲ್ಲಿ ತೊಡಗಿಸಿಕೊಂಡಿರುವುದು. ನಿರ್ದೇಶಕರು: ಬಿ.ವಿ.ಕಾರಂತ, ಡಾ ಹೆಚ್.ಕೆ.ರಂಗನಾಥ, ಪ್ರೊ: ಬಿ.ಚಂದ್ರಶೇಖರ್, ಮೇಕಪ್ ನಾಣಿ ಶ್ರೀಮತಿ ಪ್ರೇಮಾಕಾರಂತ, ಪ್ರಸನ್ನ, ಆರ್.ನಾಗೇಶ್, ಟಿ.ಎನ್.ಸೀತಾರಾಮ್, ಡಾ. ಬಿ.ಜಯಶ್ರೀ, ವಿ.ರಾಮಮೂರ್ತಿ, ಟಿ.ಎನ್.ನರಸಿಂಹನ್, ಡಾ. ಬಿ.ವಿ.ರಾಜಾರಾಂ, ಶ್ರೀಮತಿ ಆರ್.ಟಿ.ರಮಾ, ಜಿ.ಜಿ.ಕೃಷ್ಣಸ್ವಾಮಿ, ಡಾ. ಕೆ.ಆರ್.ಎಸ್.ಶರ್ಮ ಮುಂತಾದ ಪ್ರಸಿದ್ಧ ರಂಗ ನಿರ್ದೇಶಕರೊಡನೆ ಕೆಲಸ ಮಾಡಿದ ಅನುಭವ. ಸುಮಾರು ೧೫ ಕ್ಕೂ ಹೆಚ್ಚಿನ ಸಂಖ್ಯೆಯ ನಾಟಕಗಳಿಗೆ ನಿರ್ದೇಶನ ಮಾಡಿರುವ ಅನುಭವ.
ನಟನೆ: ಭಾರತದ ಬೇರೆ ಬೇರೆ ನಗರಗಳಲ್ಲಿ ಜಿಲ್ಲೆಗಳಲ್ಲಿ ಮತ್ತು ಪ್ರಮುಖ ಪಟ್ಟಣಗಳಲ್ಲಿ ಸುಮಾರು ನೂರು ನಾಟಕಗಳ ೩೦೦೦ ಕ್ಕಿಂತ ಹೆಚ್ಚಿನ ಪ್ರದರ್ಶನಗಳನ್ನು ನೀಡಿರುತ್ತಾರೆ. ವಿದೇಶಗಳಲ್ಲೂ ಸಹ ಹಲವಾರು ಪ್ರದರ್ಶನಗಳನ್ನು ನೀಡಿರುತ್ತಾರೆ. ನಾಲ್ಕು ದಶಕಗಳ ರಂಗಸೇವೆ ಮಾಡಿರುತ್ತಾರೆ. ಮೂಕಾಭಿನಯ: ಮೂಕಾಭಿನಯದಲ್ಲಿ ನೈಪುಣ್ಯತೆಯನ್ನುಗಳಿಸಿ. ಇಡೀ ದಕ್ಷಿಣ ಭಾರತದಲ್ಲಿಯೇ ಪ್ರಥಮ ಮೂಕಾಭಿನಯ ಕಲಾವಿದರೆನ್ನುವ ಹೆಗ್ಗಳಿಕೆಗೆ ಪಾತ್ರರಾಗಿರುತ್ತಾರೆ. ಶ್ರೀ ಜೋಗೇಶ್ ದತ್ತ ಕೊಲ್ಕತ್ತ. ಅಮೇರಿಕಾದ ಆಡಮ್ ಅಬ್ರಾಹಂ, ಕರ್ನಾಟಕದ ಪ್ರಸಿದ್ಧ ನಿರ್ದೇಶಕರಾದ ಶ್ರೀ ವಿ.ರಾಮಮೂರ್ತಿ ಅವರಲ್ಲಿ ಮೂಕಾಭಿನಯ ತರಬೇತಿ ಪಡೆದಿದ್ದಾರೆ. ವಿದೇಶಗಳಲ್ಲಿ ಮೂಕಾಭಿನಯ ಪ್ರದರ್ಶನ: ೧೯೮೭ ರಿಂದ ೧೯೮೯ ರ ಅವಧಿಯಲ್ಲಿ ಲಂಡನ್, ಪ್ಯಾರಿಸ್, ರೋಮ್, ಸ್ವಡ್ಜರ್‌ಲ್ಯಾಂಡ್, ಆಮ್‌ಸ್ಟರ್‌ಡಮ್, ಬೆಲ್ಜಿಯಂ, ಸಿಂಗಪುರ, ಹಾಂಗ್‌ಕಾಂಗ್ ಮತ್ತು ಮಲೇಶಿಯಾಗಳಲ್ಲಿ ಪ್ರದರ್ಶನಗಳನ್ನು ನೀಡಿರುತ್ತಾರೆ. ಪ್ರಶಸ್ತಿಗಳು: ರಾಜ್ಯಮಟ್ಟದ ನಾಟಕ ಸ್ಪರ್ಧೆಯಲ್ಲಿ ‘ಅಚಲಾಯತನ’ ನಾಟಕ ನಿರ್ದೇಶನ ಮಾಡಿದ್ದಕ್ಕಾಗಿ ಅತ್ಯುತ್ತಮ. ನಿರ್ದೇಶನ ಪ್ರಶಸ್ತಿ. ಕರ್ನಾಟಕ ನಾಟಕ ಅಕಾಡೆಮಿಯಿಂದ, ಅತ್ಯುತ್ತಮ ನಟನೆ ಮತ್ತು ರಂಗ ಪ್ರದರ್ಶನಕ್ಕಾಗಿ ೧೯೯೯ ರಲ್ಲಿ ಪ್ರಶಸ್ತಿ ಸ್ವೀಕರಿಸಿರುತ್ತಾರೆ. ನೂರಾರು ಸಂಘ-ಸಂಸ್ಥೆಗಳಿಂದ ಅತ್ಯುತ್ತಮ ನಟನೆಗಾಗಿ, ನಿರ್ದೇಶನಕ್ಕಾಗಿ ಮತ್ತು ಅಣಕು ಪ್ರದರ್ಶನಕ್ಕಾಗಿ, ಹಾಸ್ಯ ಭಾಷಣಗಳಿಗಾಗಿ ಪ್ರಶಸ್ತಿಗಳನ್ನು ಮತ್ತು ಸನ್ಮಾನಗಳನ್ನು ಸ್ವೀಕರಿಸಿರುತ್ತಾರೆ.
ಅಭಿನಯಿಸಿದ ಪ್ರಮುಖ ನಾಟಕಗಳು: ‘ಮುಖ್ಯಮಂತ್ರಿ’ ನಾಟಕದಲ್ಲಿ ಪ್ರಮುಖ ಪಾತ್ರನಾದ ಮುಖ್ಯಮಂತ್ರಿ ಪಾತ್ರವನನು (ಸುಮಾರು ೫೦೦ಕ್ಕೂ ಹೆಚ್ಚಿನ ಪ್ರದರ್ಶನಗಳು- ಕನ್ನಡ ರೂಪ.ಟಿ.ಎಸ್, ಲೋಹಿತಾಶ್ವ, ನಿರ್ದೇಶನ ಡಾ.ಬಿ.ವಿ.ರಾಜಾರಾಂ) ಯಶಸ್ವಿಯಾಗಿ ಅಭಿನಯಿಸಿದ್ದಕ್ಕಾಗಿ ‘ಮುಖ್ಯಮಂತ್ರಿ ಚಂದ್ರ’ ಎಂಬ ಹೆಸರು ಜನಪ್ರಿಯವಾಯಿತು. ಪ್ರಸನ್ನ ಅವರು ನಿರ್ದೇಶಿಸಿದ ಮ್ಯಾಕ್ಸಿಂಗಾರ್ಕಿ ಅವರ ‘ತಾಯಿ’ ನಾಟಕ. ಡಾ|| ಡಿ.ಆರ್.ನಾಗರಾಜ್ ಅವರು ರಚಿಸಿದ ವಾರ್ಡ್ ನಂ. ೬ ಆಧಾರಿತ, ಟಿ.ಎನ್.ನರಸಿಂಹನ್ ನಿರ್ದೇಶನದ ‘ಕತ್ತಲೆದಾರಿ ದೂರ’ ನಾಟಕ. ಡಾ|| ಬಿ.ಜಯಶ್ರೀ ಅವರು ನಿರ್ದೇಶಿಸಿದ ಹಾಗೂ ವಿಜಯ ತೆಂಡೂಲ್ಕರ್ ಅವರು ರಚಿಸಿದ ‘ಫಾಶೀರಾಮ್ ಕೊತ್ವಾಲ್’ ನಾಟಕ. ಚಲನಚಿತ್ರ: ೩ ದಶಕಗಳ ಕಾಲ ಚಲನಚಿತ್ರ ಕಲಾವಿದರಾಗಿ ಅಭಿನಯಿಸಿದ್ದಾರೆ. ಕೆಲವು ಚಲನಚಿತ್ರಗಳು ಚಕ್ರವ್ಯೂಹ, ಪಣಿಯಮ್ಮ, ಪ್ರಜಾಪ್ರಭುತ್ವ, ಗಜೇಂದ್ರ, ಶಬ್ದವೇಧಿ, ಗುರಿ, ಒಂದು ಮುತ್ತಿನ ಕಥೆ, ಕೋತಿಗಳ ಸಾರ್ ಕೋತಿಗಳು, ಸಿಂಧೂರ ತಿಲಕ, ಗೋಲ್‌ಮಾಲ್ ರಾಧಾಕೃಷ್ಣ, ಮುತ್ತಿನಹಾರ, ಗಣೇಶನ ಮದುವೆ, ಬೀಗರ ಪಂದ್ಯ, ಜ್ವಾಲಾಮುಖಿ, ಶಾಂತಿಕ್ರಾಂತಿ, ನಮ್ಮೂರ ರಾಜ, ಮಿಲನ, ಮಾಲಾಶ್ರೀ, ಪೋಲೀಸನ ಹೆಂಡತಿ, ಬೆಂಕಿ, ಚಾಣಕ್ಯ, ಇಂದ್ರನ ಗೆದ್ದ ನರೇಂದ್ರ, ಕಿತ್ತೂರು ಹುಲಿ, ಬಲಗಾಲಿಟ್ಟು ಒಳಗೆ ಬಾ, ಜಿದ್ದು, ಡಕೋಟ ಪಿಕ್ಚರ್ ಸೇರಿದಂತೆ ನಾಲ್ಕುನೂರ ಆರವತ್ತು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಶ್ರೀಯುತರು ೧೯೭೦ ರಲ್ಲೇ ಬೆಂಗಳೂರಿನ ಸಮುದಾಯ ಭವನದ ಮೇಲ್ಚಾವಣಿಗಾಗಿ ಒಂದು ಕಲಾವಿದರ ಸಹಾಯಾರ್ಥ ಮನರಂಜನಾ ಕಾರ್ಯಕ್ರಮವನ್ನು ಆಯೋಜಿಸಿ ಹಣ ಸಂದಾಯ ಮಾಡಿರುತ್ತಾರೆ. ಕರ್ನಾಟಕ ವಿಧಾನ ಪರಿಷತ್ ಸದಸ್ಯರಾಗಿದ್ದಾಗ ೨೦೦೫ ರಲ್ಲಿ ತಮ್ಮ ವಿಶೇಷ ಅನುಧಾನದಲ್ಲಿ ಬೆಂಗಳೂರಿನ ವಿದ್ಯಾರ್ಥಿನಿಲಯ ಕೊಠಡಿಗಳ ನಿರ್ಮಾಣಕ್ಕೆ ೨೦ ಲಕ್ಷ ರೂ, ಗೌರಿಬಿದನೂರು ಗ್ರಂಥಾಲಯಕ್ಕೆ ೧೫ ಲಕ್ಷ ರೂ, ತುಮಕೂರು ಸಮುದಾಯ ಭವನಕ್ಕೆ ೨೦ ಲಕ್ಷ ರೂಗಳ ಹಣ ಸಹಾಯ ನೀಡಿದ್ದಾರೆ. ೨೦೦೮ ರಲ್ಲಿ ಮಧುಗಿರಿ ವಿದ್ಯಾರ್ಥಿನಿಲಯ ನಿರ್ಮಾಣಕ್ಕೆ ೧೫ ಲಕ್ಷ, ಶಿರಾದಲ್ಲಿ ಸಮುಧಾಯ ಭವನ ನಿರ್ಮಾಣಕ್ಕೆ ೨೦ ಲಕ್ಷ ರೂ, ಕೊರಟಗೆರೆ ಸಮುದಾಯ ಭವನ ನಿರ್ಮಾಣಕ್ಕೆ ೧೫ ಲಕ್ಷ ರೂ ಮತ್ತು ಕೊಡಗೇನಹಳ್ಳಿ ಸಮುದಾಯ ಭವನಕಾಗಿ ೧೦ ಲಕ್ಷರೂಗಳ ಅನುದಾನ ಸೇರಿ ಒಟ್ಟು ೧.೧೫ ಕೋಟಿ ರೂಗಳ ಹಣ ವಿನಿಯೋಗಿಸಿದ್ದಾರೆ. ಗೌರಿಬಿದನೂರು ಸಮತಾ ಪ್ರೌಢಶಾಲೆ ಸರ್ಕಾರದ ಅನುಧಾನಕ್ಕೆ ಒಳಪಡಿಸುವಲ್ಲಿ ಪ್ರಮುಖ ಪಾತ್ರವಹಿಸಿದ ಶ್ರೀಯುತರು ಸದಾ ಕಾಲ ಸಂಘ ಸಮಾಜದ ಕಾರ್ಯಗಳಲ್ಲಿ ನೆರವಿನ ಮಹಾಪೂರವೇ ಹರಿಸಿದ್ದಾರೆಂದರೆ ತಪ್ಪಾಗಲಾರದು.
|
ಶ್ರೀಯುತ ಡಾ|| ರಂಗಾರೆಡ್ಡಿ ಕೋಡೀರಾಂಪುರ ಖ್ಯಾತ ಸಾಹಿತಿಗಳು, ಜಾನಪದ ತಜ್ಜ್ಣರು, ಕನ್ನಡ ಉಪನ್ಯಾಸಕರು ಮತ್ತು ಚಲನಚಿತ್ರ ಕಲಾವಿದರು
|
ಡಾ|| ರಂಗಾರೆಡ್ಡಿ ಕೋಡೀರಾಂಪುರ, Phd. : ಜಾನಪದವೇ ಅಲ್ಲ ಎಂದು ಸಾಂಪ್ರದಾಯಿಕ ವಿದ್ವಾಂಸರು ಅಭಿಪ್ರಾಯ ಪಡುವ ವಿವಾದಾಸ್ಪದ ಕೃತಿ “ಲಿಖಿತ” ಜಾನಪದವನ್ನು ಪ್ರಕಟಿಸುವ ಮೂಲಕ ಜಾನಪದದ ಬಗ್ಗೆ ಹೊಸರೀತಿ ಆಲೋಚನೆಗಳಿಗೆ ದಾರಿಮಾಡಿಕೊಟ್ಟ ಕೋಡಿರಾಂಪುರ ಅವರು ವಿದ್ಯಾರ್ಥಿಯಾಗಿದ್ದಾಗಲೇ ಮೈಸೂರು ವಿ.ವಿ.ಯ ಶ್ರೀ ಹೊನ್ನಶೆಟ್ಟಿ ಪ್ರಬಂಧ ಸ್ಪರ್ಧೆಯ ಪ್ರಶಸ್ತಿ ಪಡೆದರು. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರವಾಸ ಅನುದಾನ ಯೋಜನೆಯ ಅಡಿಯಲ್ಲಿ ಪಶ್ಚಿಮ ಬಂಗಾಳದಲ್ಲಿ ಪ್ರವಾಸ ಕೈಗೊಂಡು ಅಲ್ಲಿಯೇ ಕಲೆ ಸಾಹಿತ್ಯ ಸಂಸ್ಕೃತಿಯ ಪರಿಚಯ ಮಾಡಿಕೊಂಡರು. ಎಲ್ಲ ಜನಪರ ಚಳುವಳಿಗಳ ಸಂಪರ್ಕ ಇಟ್ಟುಕೊಂಡ ಇವರು ಜನಪದ ಸಾಹಿತ್ಯದಲ್ಲಿರುವ ಬಂಡಾಯ ಮನೋಧರ್ಮವನ್ನು ಪ್ರತಿ ಸಂಸ್ಕೃತಿಯ ವಿವರದ ಒಳನೋಟಗಳನ್ನು ಮೊಟ್ಟಮೊದಲಿಗೆ ಲೇಖನಗಳ ಮೂಲಕ ಪ್ರಕಟಿಸಿದರು. ಬಂಡಾಯ ಸಮುದಾಯ ರೈತ ಚಳುವಳಿ, ದಲಿತ ಚಳುವಳಿಗಳ ಆಶಯವನ್ನು ಸಾಮಾನ್ಯ ಜನತೆಗೆ ಮುಟ್ಟಿಸಲು ಜನಪದ ಶೈಲಿಯ ಬೀದಿನಾಟಕಗಳನ್ನು ರಚನೆ ಮಾಡಿದರು. ಬರಗಾಲದ ಸಂದರ್ಭದಲ್ಲಿ ಇವರು ಬರೆದ ಮಳೆದೂತರು ಬೀದಿ ನಾಟಕ ಕುಂದಾಪುರದಿಂದ ಕೋಲಾರದವರೆಗೆ ನಡೆದ ಸಮುದಾಯ ಜಾಥದಲ್ಲಿ ಸುಮಾರು ಇನ್ನೂರು ಪ್ರದರ್ಶನ ಕಂಡಿವೆ. ನಾಟಕ ಅಕಾಡೆಮಿಯ ಕಾರ್ಯಗಾರಗಳಲ್ಲಿ ಭಾಗವಹಿಸಿ ಹೀಗೂ ಒಬ್ಬರಾಜ, ನಮ್ಮೊಳಗೊಬ್ಬ ನಾಜೂಕಯ್ಯ. ಸಿಬಿಐನವರು ಬಂದಿದ್ದಾರೆ. ಮುಂತಾದ ನಾಟಕಗಳಲ್ಲಿ ಪಾತ್ರವಹಿಸಿದ್ದಾರೆ. ಇವರೇ ಬರೆದ ಚಾರಿತ್ರಿಕ ಘಟನೆಯನ್ನು ಒಳಗೊಂಡ ವಿದುರಾಶ್ವತ್ಥ ಹತ್ಯಾಕಾಂಡ, ನಾಟಕದಲ್ಲಿ ಕರಪಾಲ ಮೇಳದ ತಂತ್ರವನ್ನು ಬಳಸಿದ್ದಾರೆ. ಕರಿಭಂಟನ ಕಾಳಗ, ಸುಂದೋಪಸುಂದ, ಮುಂತಾದ ಯಕ್ಷಗಾನಗಳಲ್ಲಿ ಪಾತ್ರವಹಿಸಿರುವುದೇ ಅಲ್ಲದೆ ಶ್ರೀ ಬರಗೂರು ರಾಮಚಂದ್ರಪ್ಪನವರ ಪ್ರಶಸ್ತಿ ವಿಜೇತ “ಬೆಂಕಿ”, “ಕೋಟೆ”, ಚಲನ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. “ನನ್ನೂರಹಾಡು” ಎಂಬ ಕವನ ಸಂಕಲನವನ್ನು ಪ್ರಕಟಿಸಿ ಸಂಘಟನೆ, ಹೋರಾಟ, ಸೃಜನಶೀಲತೆ ಈ ಮೂರನ್ನೂ ಮೈಗೂಡಿಸಿಕೊಂಡಿರುವ ಇವರು ಈಗ ಎರಡನೇ ಅವಧಿಗೆ ಜಾನಪದ ಅಕಾಡೆಮಿಯ ಸದಸ್ಯರಾಗಿದ್ದಾರೆ.
|
ಶ್ರೀಯುತ ಶ್ರಿ ಯೋಗೇಶ್ ರಾಜ್ ರವರು ಕನ್ನಡ ಚಲನಚಿತ್ರ ಮತ್ತು ಕಿರುತೆರೆ ನಟರು
|
ಶ್ರಿ ಯೋಗೇಶ್ ರಾಜ್ ರವರು ಮೂಲತಃ ಕೊರಟಗೆರೆ ತಾಲ್ಲೂಕ್ ಅಲಾಳಸಂದ್ರ ಗ್ರಾಮದ ಶ್ರೀ ಮಂಜುನಾಥ್ ಎ.ಆರ್.ರವರ ಪುತ್ರ.೧೯೮೯ ರಲ್ಲಿ ಜನಿಸಿದ ಶ್ರೀಯುತರು ಪ್ರಾಥಮಿಕ ವಿದ್ಯಾಭ್ಯಾಸವನ್ನು ಅಳಾಲಸಂದ್ರದಲ್ಲಿ ಮುಗಿಸಿ,ಬೆಂಗಳೂರಿನಲ್ಲಿ ಸಿವಿಲ್ ಇಂಜನಿಯರಿಂಗ್ ವಿದ್ಯಾಭ್ಯಾಸ ಮಾಡಿ ಕಿರುತೆರೆ ದಾರಾವಾಹಿಗಳಲ್ಲಿ ನಟನೆಯನ್ನು ಹವ್ಯಾಸವಾಗಿಸಿಕೊಂಡು, ವೃತ್ತಿಯಾಗಿ ಸ್ವೀಕರಿಸಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಸುಮಾರು ೧೫ ಕ್ಕೂ ಹೆಚ್ಚಿನ ದಾರಾವಾಹಿಗಳಲ್ಲಿ ತಮ್ಮ ಮನೋಜ್ಞ ಅಭಿನಯದಿಂದಾಗಿ ಕರ್ನಾಟಕದಾದ್ಯಂತ ಮನೆಮಾತಾಗಿದ್ದಾರೆ. ಸದ್ಯ ಕಲರ್ಸ್ ಕನ್ನಡ ಟಿ.ವಿ. ಯಲ್ಲಿ ಪ್ರಸಾರವಾಗುತ್ತಿರುವ ಅಕ್ಕ ದಾರಾವಾಹಿಯಲ್ಲಿ ಪ್ರಮುಖವಾದ ಅರ್ಜುನ್ ಪಾತ್ರಧಾರಿಯಾಗಿ ನಟಿಸುತ್ತಿದ್ದಾರೆ. ಕಲರ್ಸ್ ಕನ್ನಡ ಟಿ.ವಿ.ಯ ಸ್ಟೈಲ್ ಐಕಾನ್-೨೦೧೫ ರ ಸ್ಪರ್ದೆಯಲ್ಲಿ ಭಾಗಿಗಳಾಗಿ ಕನ್ನಡಿಗರನ್ನು ಮನಸೂರೆಗೊಂಡಿದ್ದಾರೆ. ೨೦೧೬ ರಲ್ಲಿ ತೆರೆಕಂಡ ದಿನಕರ್ ತೂಗುದೀಪ್ ನಿರ್ಮಾಣದ ಕವಿರಾಜ್ ನಿರ್ದೇಶನದ "ಮದುವೆಯ ಮಮತೆಯ ಕರೆಯೋಲೆ" ಚಲನಚಿತ್ರದಲ್ಲಿ ಒಂದು ಮುಖ್ಯಪಾತ್ರದಲ್ಲಿ ಅಭಿನಯಿಸುವ ಮೂಲಕ ಚಿತ್ರರಂಗಕ್ಕೂ ಪಾದಾರ್ಪಣೆ ಮಾಡಿದ್ದಾರೆ.ಉತ್ತಮ ನಟರಾಗಿ ಭವಿಷ್ಯ ರೂಪಿಸಿಕೊಳ್ಳುವಲ್ಲಿ ಶ್ರೀಯುತರ ಪರಿಶ್ರಮ ಅಭಿನಂದನಾರ್ಹ. |